Friday, January 2, 2009

ಎಲ್ಲಿ ಹನುಮನೊ ಅಲ್ಲಿ ರಾಮನು




*********
ಎತ್ತಲೊ ಮಾಯವಾದ ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ? ಮುತ್ತೆತ್ತ ರಾಯ.

ಅತ್ತಾ ಸೀತಮ್ಮನ ಮುದ್ದು ಮೊಗದಲ್ಲಿ ಮತ್ತೆ
ನಗೆಯ ತಂದೆಯಾ ಮಹನೀಯಾ? ಮಾರುತಿರಾಯ!

ಸೀತಮ್ಮ ಸ್ನಾನ ಮಾಡಿ, ಮೂಗುತಿಯ ಹುಡುಕಾಡಿ
ನಿನ್ನ ಕೂಗಿದಳೇನು ಹನುಮಂತ ರಾಯ!

ನೀರಲ್ಲಿ ಬಾಲ ಬಿಟ್ಟು ನದಿಯನ್ನೆ ಶೋಧಿಸಿದೆ
ಎಂತ ಶ್ರದ್ಧೆಯೋ ಮಹನೀಯಾ, ಹನುಮಂತ ರಾಯ!

ಅಮ್ಮಾ ಸೀತಮ್ಮನು ನಿನ್ನ ಭಕ್ತಿಗೆ ಮೆಚ್ಚಿ ಮುತ್ತೆತ್ತೆರಾಯನೆಂದು ಹರಸಿದಳೇನು?
ನಿನ್ನಂತ ದಾಸನನು ಪಡೆದಾ ಶ್ರೀ ರಾಮನು ಎಂಥ ಭಾಗ್ಯವಂಥನಯ್ಯ, ಹನುಮಂತ ರಾಯ

ನಿನ್ನಂತೆ ಭಕ್ತಿ ಇಲ್ಲ, ನಿನ್ನಂತೆ ಶಕ್ತಿ ಇಲ್ಲ.
ಏನೂ ಇಲ್ಲದ ಜೀವ ನನ್ನದು ಸ್ವಾಮಿ
ನಿನ್ನೆ ನಾ ನಂಬಿ ಬಂದೆ ನೀನೆ ನನ್ನ ತಾಯಿ ತಂದೆ.
ಕಾಪಾಡುವಾ ಹೊಣೆಯು ನಿನ್ನದು, ತಂದೆ ನಿನ್ನದು.

’*******

ಎಲ್ಲಿ ಹನುಮನೊ ಅಲ್ಲಿ ರಾಮನು ಎಲ್ಲಿ ರಾಮನೊ ಅಲ್ಲಿ ಹನುಮನು
ರಾಮನೆ ಉಸಿರೇ ಹನುಮಾ, ಹನುಮನ ಪ್ರಾಣವೇ ರಾಮಾ

ಎಲ್ಲಿ ನೆನೆದರು ಅಲ್ಲಿಯೇ ಇರುವನು; ಎಲ್ಲಿ ಕರೆದರು ಅಲ್ಲಿ ಬರುವನು
ನೆರಳಿನಂತೆಯೆ ಬಳಿಯಲಿರುವನು, ಕರುಣೆಯಿಂದಲಿ ಸುಖ ಶಾಂತಿ ನೀಡುವ ಮುಖ್ಯಪ್ರಾಣ

ಮಂತ್ರಾ, ತಂತ್ರಾ ಕೇಳನು, ಸ್ತೋತ್ರ ಮಾಡುತಾ ತನ್ನ ಹೊಗಳು ಎನ್ನನು
ಪ್ರೇಮದಿಂದ ನೀ ಕರೆಯೆ ಬರುವನು, ಭಕ್ತನೊಬ್ಬನೆ ಅವನ ಗೆಲವನು ಎಂದೆಂದು

ಸ್ಮರಣೆ ಮಾತ್ರದಿ ಮನೆದಿ ಬೆರೆವನು, ಕಾಮ ಕ್ರೋಧ ಕ್ಷಣದಲ್ಲಿ ದಹಿಸಿ ಬಿಡುವನು
ಶಾಂತಿ ಕೊಡುವನು ನೆಮ್ಮದಿಯ ತರುವನು ಮನಸಿಗೆ ಮಹದಾನಂದ ನೀಡುವ ಮುಖ್ಯ ಪ್ರಾಣ

’******

ನಿನ್ನಂತೆ ನಾನಾಗಲಾರೆ ಏನುಮಾಡಲಿ ಹನುಮ
ನಿನ್ನಂತಾಗದೆ, ನನ್ನವನಾಗನೆ ನಿನ್ನ ಪ್ರಭು ಶ್ರೀ ರಾಮ

ಏಟುಕದ ಹಣ್ಣನೆ ನಾ ತರಲಾರೆ ಮೇಲಕೆ ಎಗರಿ ಹನುಮ
ಸೂರ್ಯನ ಹಿಡಿವ ಸಾಹಸಕಿಳಿದರೆ ಆ ಕ್ಷಣ ನಾ ನಿರ್ನಾಮ
ಹಾದಿಯ ಹಳ್ಳವೆ ದಾಟಲಸಾಧ್ಯ ಹೀಗಿರುವಾಗ ಹನುಮ
ಸಾಗರ ದಾಟುವ ಹಂಬಲ ಸಾಧ್ಯವೆ ಅಯ್ಯೋ ರಾಮರಾಮ

ಜಗಳ ಕಂಡರೆ ಓಡುವೆ ದೂರ ಎದೆಯಲಿ ಡವ ಡವ ಹನುಮ
ರಕ್ಕಸರಾ ನಾ ಕನಸಲಿ ಕಂಡರು ಬದುಕಿಗೆ ಪೂರ್ಣವಿರಾಮ
ಅಟ್ಟವ ಹತ್ತಲೆ ಶಕ್ತಿಯು ಇಲ್ಲ ಅಂತ ದೇಹವು ಹನುಮಾ
ಬೆಟ್ಟವನೆತ್ತುವೆನೆಂದರೆ ನನ್ನನು ನಂಬುವನೆ ಶ್ರೀರಾಮ?

ಕನಸಲಿ ಮನಸಲಿ ನಿನ್ನ ಉಸಿರಲಿ ತುಂಬಿದೆ ರಾಮನನಾಮ
ಚಂಚಲವಾದ ನನ್ನ ಮನದಲಿ ನನ್ನೀ ಮನದಲಿ ನಿಲ್ಲುವರಾರೂ ಹನುಮ
ಭಕ್ತಿಯು ಇಲ್ಲ ಶಕ್ತಿಯು ಇಲ್ಲ ಹುಟ್ಟಿದೆ ಯಾತಕೊ ಕಾಣೆ
ನೀ ಕೃಪೆಮಾಡದೆ ಹೋದರೆ ಹನುಮ ನಿನ್ನಯ ರಾಮನ ಆಣೇ

’ ********

No comments: